ಶಿಕ್ಷಣ ಎಂಬುದು ನಿರಂತರ ಕ್ರಿಯೆ. ವ್ಯಕ್ತಿಯು ತನ್ನ ದೇಹ, ಮನಸ್ಸು ಮತ್ತು ಜಗತ್ತಿನ ಜೀವ ಜಂತುಗಳ ಬಗ್ಗೆ ಅರಿವನ್ನುಂಟು ಮಾಡುವುದೇ ಶಿಕ್ಷಣ. ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತನಾದ ಪ್ರಾಣಿ ಮಾನವ. ಈ ಮಾನವ ಪ್ರಪಂಚದ ಅಧಿಪತ್ಯವನ್ನು ಹೊಂದಬೇಕಾದರೆ ಅದಕ್ಕೆ ಗುರುವೇ ಮೂಲ ಕಾರಣ ಎಂದರೆ ತಪ್ಪಾಗಲಾರದು. ಮಕ್ಕಳು ತಮ್ಮ ಜೀವನ ಪದದ ಅರ್ಥವನ್ನು ಅರಿಯುವುದು ಗುರುವಿನಿಂದ.
ವ್ಯಕ್ತಿ ಬದುಕಲು ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಶಿಕ್ಷಣ. ಶಿಕ್ಷಣಕ್ಕೆ ಸಮನಾದುದು ಮತ್ತೊಂದಿಲ್ಲ. ಮನುಷ್ಯನ ವರ್ತನೆಗಳನ್ನು ಪರಿವರ್ತನೆಮಾಡಿ ಮನುಷ್ಯನನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದು. ಮನುಷ್ಯನಿಗೆ ಅವನ ಹುಟ್ಟಿನಿಂದಲೇ ಶಿಕ್ಷಣ ಪ್ರಾರಂಭವಾಗುತ್ತದೆ. ತಂದೆ-ತಾಯಿ, ಬಂಧು-ಬಳಗ ಹಾಗೂ ತನ್ನ ಸುತ್ತಲಿನ ಪರಿಸರದಿಂದ ಮಗು ಒಂದೊಂದೇ ಕಲಿಕೆಯನ್ನು ಕಲಿಯುತ್ತಾ ಸಾಗುತ್ತದೆ. ಮಗುವಿಗೆ ತನ್ನ ಸುತ್ತಲಿನ ಜ್ಞಾನ ಬಂದೊಡನೆ ಅದಕ್ಕೆ ಹೊಸ ಶಿಕ್ಷಣದ ಅವಶ್ಯಕತೆಯಿರುತ್ತದೆ. ಅದೇ ಪ್ರಾಥಮಿಕ ಶಿಕ್ಷಣ. ಪ್ರಾಥಮಿಕ ಶಿಕ್ಷಣವು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಹಾಗೂ ಭವಿಷ್ಯಕ್ಕೆ ಭದ್ರವಾದ ಬುನಾದಿಯಾಗುತ್ತದೆ.
ಶಿಕ್ಷಣವು ನಮ್ಮೆಲ್ಲರ ಜೀವನವನ್ನು ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಕೈದೀವಿಗೆಯಾಗಿದೆ. ವಿವಿಧ ರಂಗಗಳಲ್ಲಿ ಜ್ಞಾನ ನೀಡುವ ಸಾಧನವಾಗಿದೆ. ವ್ಯಕ್ತಿಯ ಹಾಗೂ ಸಮಾಜದ ಭವಿಷ್ಯವನ್ನು ಬದಲಿಸುವ ಶಕ್ತಿ ಶಿಕ್ಷಣದಲ್ಲಿ ಅಡಕವಾಗಿದೆ. ಶಿಕ್ಷಣವು ಬೌದ್ಧಿಕ, ಮಾನಸಿಕ ಹಾಗೂ ಶಾರೀರಿಕ ವ್ಯಕ್ತಿತ್ವವನ್ನು ರೂಪಿಸುವುದಾಗಿದೆ. ಶಿಕ್ಷಣದಿಂದ ಮಾತ್ರ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ. ಈ ಶಿಕ್ಷಣವು ಅವನು ಪಡೆದ ಅರಿವನ್ನು ಮಾನವ ಕಲ್ಯಾಣಕ್ಕೆ ಬಳಸುವಂತೆ ಮಾಡುತ್ತದೆ.
ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ. ಅದರಲ್ಲಿ ಕಪ್ಪುಗೆರೆ ಬೀಳದಂತೆ, ಆ ಹಾಳೆ ಹರಿಯದಂತೆ ಕಾಪಾಡುವುದು ಇಂದಿನ ಶಿಕ್ಷಣದ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ಪ್ರತಿಭೆ, ಶಕ್ತಿ ಇರುತ್ತದೆ. ಇದು ಪ್ರಕೃತಿ ದತ್ತವಾದುದು. ಕೆಲವು ಮಕ್ಕಳಿಗೆ ಪೋಷಣೆ, ಪ್ರೇರಣೆ, ಅವಕಾಶ ದೊರೆತು ಅವರು ಪ್ರಜ್ವಲಿಸಬಹುದು. ಇನ್ನು ಹೆಚ್ಚಿನ ಭಾಗದ ಮಕ್ಕಳ ಪ್ರತಿಭೆ, ಶಕ್ತಿಯನ್ನು ಗುರುತಿಸುವರಿಲ್ಲದೆ ಅವರು ಅವಕಾಶ ವಂಚಿತರಾಗುತ್ತಾರೆ. ಅದು ಹಾಗಾಗಲು ಅವಕಾಶ ಮಾಡಿ ಕೊಡದೆ ಇದನ್ನು ಗುರುತಿಸಬೇಕಾದುದು ಶಿಕ್ಷಣ ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಮಗುವಿನಲ್ಲಿ ಅಡಕವಾಗಿರುವ ಪ್ರಬಲ ಶಕ್ತಿ ಶಿಕ್ಷಣದಿಂದ ಸ್ಪುಟವಾಗಿ ಹೊರಹೊಮ್ಮಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂತಹ ಭಾವಿ ಪ್ರಜೆಗಳಿಗೆ ಜ್ಞಾನವೆಂಬ ಆಹಾರವನ್ನು ನೀಡಿ ದೇಶದ ಕೀರ್ತಿ ಹಾಗೂ ಭಾವೈಕ್ಯತೆಯನ್ನು ಉಳಿಸುವ, ಬೆಳೆಸುವ ಏಕಮಾತ್ರ ವ್ಯಕ್ತಿ ಎಂದರೆ ಶಿಕ್ಷಕ.
ಕೇವಲ ಓದು ಬರಹಕ್ಕಿಂತ ಮಕ್ಕಳಲ್ಲಿ ಸಹಬಾಳ್ವೆಯ ಪಾಠ ಕಲಿಸಬೇಕಾಗಿದೆ ಶಿಸ್ತನ್ನು ಮೈಗೂಡಿಸಬೇಕಾಗಿದೆ. ಸಂಸ್ಕøತಿ, ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಕ್ಕಳು ಬೆಳೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವವನ್ನು ರೂಪಿಸುವ ಸದುದ್ದೇಶದಿಂದ ನಾಡಿನ ಖ್ಯಾತ ಚಿಂತಕರು, ಲೇಖಕರು, ಸಾಂಸ್ಕøತಿಕ-ಧಾರ್ಮಿಕ ನೇತಾರರೂ, ರಂಗ ಜಂಗಮರೆಂದೇ ನಾಡಿನಾದ್ಯಂತ ಖ್ಯಾತಿಯನ್ನು ಪಡೆದ ಪೂಜ್ಯ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ದೇಸೀ ಸಂಸ್ಕøತಿಯ ತಳಹದಿಯ ಮೇಲೆ ‘ವಿಶ್ವಬಂಧುತ್ವ’ವನ್ನು ಬೆಳೆಸುವ ಆಶಯವನ್ನು ಹೊಂದಿ 1988-1989ನೇ ಸಾಲಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು.
ಇದನ್ನು ಸಾಕಾರಗೊಳಿಸುವ ಹಿನ್ನೆಲೆಯಲ್ಲಿ 1990-1991ರಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ನರ್ಸರಿ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಗೊಳಿಸಿತು. ನಂತರ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯನ್ನು (ಅನುದಾನರಹಿತ) ಪ್ರಾರಂಭಿಸಿತು.
ಗ್ರಾಮೀಣ ಪ್ರದೇಶದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅವರು ನಗರದ ವಿದ್ಯಾರ್ಥಿಗಳಂತೆ ಎಲ್ಲ ಸೌಕರ್ಯಗಳನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ ಪೂಜ್ಯರದು. ಅದರ ಫಲವಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯು ದಿನಾಂಕ 15-11-2011ರಂದು ಸರ್ಕಾರದ ಅನುದಾನಕ್ಕೆ ಒಳಪಟ್ಟಿತು.
ನಮ್ಮ ಶಾಲೆಯು ಸುಂದರವಾದ ಮತ್ತು ಭವ್ಯವಾದ ಕಟ್ಟಡದ ಜೊತೆಗೆ ವಿಶಾಲವಾದ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯಗಳು, ಗ್ರಂಥಾಲಯ, ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಅಳವಡಿಸಿದ ಗಣಕಯಂತ್ರ ಕೊಠಡಿ, ಸ್ಮಾರ್ಟ್ ರಂಗಮಂದಿರಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಪ್ರತ್ಯೇಕ ವಸತಿ ನಿಲಯಗಳು, ವಚನ ಸಂಗೀತ, ಭರತನಾಟ್ಯ, ಯೋಗ ತರಬೇತಿ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಂತೆ ಮಕ್ಕಳಿಗೆ ಬೋಧಿಸಲು ನುರಿತ ಅಧ್ಯಾಪಕ ವೃಂದವನ್ನು ಒಳಗೊಂಡಿದೆ.
ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಪೂಜ್ಯ ಶ್ರೀಗಳ ಸಲಹೆ, ಮಾರ್ಗದರ್ಶನ ನಿರಂತರ ನಡೆಯುತ್ತಲೇ ಇರುತ್ತದೆ. ಕೇವಲ ಸಲಹೆ, ಮಾರ್ಗದರ್ಶನ ನೀಡದೆ ಮಕ್ಕಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಶಿಕ್ಷಣದ ಗುಣಮಟ್ಟದ ಬಗ್ಗೆ ಅವಲೋಕಿಸಿ ಪ್ರಶಂಸಿಸುತ್ತಾರೆ. ಜೊತೆಗೆ ದೋಷಗಳು ಕಂಡುಬಂದರೆ ತಕ್ಷಣದಲ್ಲಿಯೇ ಅದಕ್ಕೆ ಸಂಬಂಧಪಟ್ಟವರ ಮೇಲೆ ನೇರವಾಗಿ ಸೂಕ್ತ ಕ್ರಮಗಳನ್ನು ತಗೆದುಕೊಳ್ಳುವರು.
ಇವೆಲ್ಲವುಗಳಿಗೆ ಪೂರಕವಾಗಿ ಶಾಲೆಯ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು, ಪೋಷಕರ ಸಭೆಗಳು ನಿರಂತರವಾಗಿ ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಪ್ರಗತಿಯನ್ನು ಸಾಧಿಸಲು ಶ್ರಮಿಸುತ್ತಿವೆ. ಶಾಲೆಯ ಶಿಕ್ಷಕ ವೃಂದವೂ ಸಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಹಗಲಿರುಳು ನಿಸ್ವಾರ್ಥ ಸೇವಾಮನೋಭಾವನೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಅನೇಕ ವೈವಿಧ್ಯಮಯವಾದ ಒಂದಿಲ್ಲೊಂದು ಕಾರ್ಯಚಟುವಟಿಕೆಗಳು ನಿರಂತರವಾಗಿ ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ.
ನಮಗೆ ಸದಾ ಸ್ಪೂರ್ತಿಯ ಸೆಲೆಯಾಗಿ, ಮಾರ್ಗದರ್ಶಕರಾಗಿ, ಆಶೀರ್ವದಿಸುತ್ತಾ ಬಂದಿರುವ ಪೂಜ್ಯ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
No comments:
Post a Comment